ⓘ ಕಲ್ಲಿನ ಆಯುಧಗಳು

                                     

ⓘ ಕಲ್ಲಿನ ಆಯುಧಗಳು

ಕಲ್ಲಿನ ಆಯುಧಗಳು ಪ್ರಾಣಿ ಚತುಷ್ಟಾದಿಯಾಗಿದ್ದ ದೆಶೆಯಿಂದ ದ್ವೀಪಾದಿಯಾದ ಹಂತದಲ್ಲಿ ಮಾನವನ ಉಗಮವಾಯಿತೆಂದು ಜೀವಶಾಸ್ತ್ರಜ್ಞರೂ ಭೂಶಾಸ್ತ್ರಜ್ಞರೂ ಅಭಿಪ್ರಾಯಪಟ್ಟಿದ್ದರೂ ಬಹು ನಿಧಾನವಾಗಿ ಸಂಭವಿಸಿದ ಈ ರೀತಿಯ ಬದಲಾವಣೆಗಳಲ್ಲಿ ಮಾನವನ ಉಗಮವನ್ನು ಯಾವುದೇ ಒಂದು ನಿರ್ದಿಷ್ಟ ಹಂತಕ್ಕೆ ಅನ್ವಯಿಸಲು ಸಾಕಷ್ಟು ಆಧಾರಗಳು ದೊರಕಿಲ್ಲ. ಮಾನವ ಆಯುಧ ನಿರ್ಮಾಣ ಮಾಡತೊಡಗಿದ ಕಾಲಕ್ಕೆ ಅವನ ಉಗಮವನ್ನು ಪ್ರಾಕ್ತನಶಾಸ್ತ್ರಜ್ಞರು ನಿರ್ದೇಶಿಸುತ್ತಾರಲ್ಲದೆ ಅವನನ್ನು ಆಯುಧ ನಿರ್ಮಾತೃ ಮಾನವನೆಂದು ಕರೆದಿದ್ದಾರೆ. ಈಗ ದೊರಕಿರುವ ಅತ್ಯಂತ ಪುರಾತನ ಮಾನವ ನಿರ್ಮಿತ ಆಯುಧಗಳ ಕಾಲದಲ್ಲಿ ಮಾನವನ ಉಗಮವಾಗಿರಬೇಕು. ಕಲ್ಲಿನ ಆಯುಧಗಳಿಗೂ ಮುಂಚೆ, ಕಲ್ಲಿಗಿಂತಲೂ ಮೃದುವಾದ ಮತ್ತು ಸುಲಭವಾಗಿ ರೂಪಿಸ ಬಹುದಾದ ಮೂಳೆ ಮತ್ತು ಮರಗಳ ಆಯುಧಗಳನ್ನು ಮಾನವ ನಿರ್ಮಿಸಿ ಉಪಯೋಗಿಸಿದ್ದಿರಬಹುದಾದರೂ ಪ್ರಕೃತಿಯಲ್ಲಿ ಬೇಗ ನಾಶಹೊಂದುವ ಮೂಳೆ ಮರಗಳ ಆಯುಧೋಪಕರಣಗಳು ದೊರಕಿಲ್ಲ. ನಮಗೆ ದೊರಕಿರುವ ಅತ್ಯಂತ ಪ್ರಾಚೀನವಾದವು ಕಲ್ಲಿನ ಆಯುಧಗಳು. ಆದುದರಿಂದ ಮಾನವನ ಉಗಮ ಮತ್ತು ವಿಕಾಸಗಳ ಅಧ್ಯಯನಕ್ಕೆ ಕಲ್ಲಿನ ಆಯುಧಗಳು ಮುಖ್ಯ ಆಧಾರಗಳಾಗಿವೆ.

                                     

1. ಕತ್ತರಿಸುವ ಮತ್ತು ಚೂಪಾದ ಆಯುಧ

ಕತ್ತರಿಸುವ ಮತ್ತು ಚೂಪಾದ ಆಯುಧಗಳನ್ನು ನಿರ್ಮಿಸುವ ಮೊದಲು ಮಾನವ ದೀರ್ಘಕಾಲದವರೆಗೂ ವಿವಿಧ ಹಣ್ಣು, ಗೆಡ್ಡೆಗೆಣಸು, ಬೇರು ಮತ್ತು ಎಲೆಗಳನ್ನೂ ಸಣ್ಣಪ್ರಾಣಿಗಳು, ಕೀಟಗಳು ಮತ್ತು ಜಲಚರಗಳನ್ನೂ ತಿನ್ನುತ್ತಿದ್ದಿರಬೇಕು. ದೊಡ್ಡ ಪ್ರಾಣಿಗಳನ್ನು ಬೇಟೆಯಾಡಿ ಕೊಲ್ಲಲೂ ಹಾಗೆ ಕೊಂದ ಪ್ರಾಣಿಗಳ ಚರ್ಮ ಸುಲಿದು ಮಾಂಸವನ್ನು ಬೇರ್ಪಡಿಸಿ, ಸಣ್ಣ ತುಂಡುಗಳಾಗಿ ಕತ್ತರಿಸಿ ತಿನ್ನಲೂ ಬೇಕಾದ ಇತರ ಪ್ರಾಣಿಗಳಿಗಿರುವಂಥ ಬಲವಾದ ಹಲ್ಲು, ಉಗುರುಗಳೂ ಇವನಿಗಿರಲಿಲ್ಲ. ಆದುದರಿಂದ ಈತ ಆಯುಧ ನಿರ್ಮಾಣದ ಅನಂತರವೇ ಮಾಂಸವನ್ನು ಮುಖ್ಯ ಆಹಾರವನ್ನಾಗಿ ಮಾಡಿಕೊಳ್ಳಲು ಸಾಧ್ಯವಾಯಿತು. ಅತ್ಯಂತ ಪುರಾತನವಾದ ಕಲ್ಲಿನ ಆಯುಧಗಳನ್ನು ಉಂಡೆಕಲ್ಲಿನ ಆಯುಧಗಳೆಂದು ಕರೆಯಲಾಗಿದೆ. ಸರಳ ರೀತಿಯ ಈ ಆಯುಧಗಳನ್ನು ಪ್ಲಿಸ್ಟೊಸೀನ್ ಏಷ್ಯ ಖಂಡಗಳಲ್ಲಿ ಬಳಸುತ್ತಿದ್ದರು. ನದೀಕಣಿವೆಗಳಲ್ಲಿ ದೊರಕುವ ಉಂಡೆಕಲ್ಲುಗಳ ಒಂದು ಮುಖದಿಂದ ೩-೪ ಚಕ್ಕೆಗಳನ್ನು ತೆಗೆದು ಡೊಂಕಾದ ಅಂಚುಳ್ಳ ಕಲ್ಲುಮಚ್ಚು ಮುಂತಾದ ಭಾರವಾದ ಆಯುಧಗಳನ್ನು ನಿರ್ಮಿಸುತ್ತಿದ್ದರು. ಪ್ರಾರಂಭದೆಶೆಯ ಈ ಉಂಡೆ ಕಲ್ಲಿನ ಆಯುಧಗಳನ್ನು ಪ್ರಾಕೃತಿಕವಾಗಿ ಒಡೆದ ಮುರುಕು ಕಲ್ಲುಗಳಿಂದ ಪ್ರತ್ಯೇಕಿಸುವುದು ಕಷ್ಟಸಾಧ್ಯವಾದರೂ ಕ್ರಮೇಣ ಮಾನವನಿರ್ಮಿತ ಆಯುಧಗಳು ವಿಶಿಷ್ಟ ರೂಪರೇಷೆಗಳನ್ನು ಪಡೆದು ಕೊಂಡುವು; ಅಲ್ಲದೆ ಇವು ಹೆಚ್ಚು ಸಂಖ್ಯೆಯಲ್ಲಿ ದೊರಕುತ್ತಯಾದುದ ರಿಂದ ಇವನ್ನು ಸುಲಭವಾಗಿ ಗುರುತಿಸುವುದು ಸಾಧ್ಯವಾಯಿತು.

                                     

2. ಉಂಡೆಕಲ್ಲಿನ ಡೊಂಕು ಅಂಚಿನ ಆಯುಧ

ಅನಂತರ ಕಾಲದಲ್ಲಿ ಈ ಸರಳ ರೀತಿಯ ಉಂಡೆಕಲ್ಲಿನ ಡೊಂಕು ಅಂಚಿನ ಆಯುಧಗಳಿಂದ ಕೌಶಲ್ಯಪೂರ್ಣವೂ ನೇರ ಮತ್ತು ನಿರ್ದಿಷ್ಟ ಆಕಾರದವೂ ಆದ ಕೈಗೊಡಲಿ ರೂಪಿತವಾಗಿ, ಪೂರ್ವಶಿಲಾ ಯುಗದಲ್ಲಿ ಅತ್ಯಂತ ಪ್ರಮುಖವಾಗಿದ್ದ ಕೈಗೊಡಲಿ ಸಂಸ್ಕೃತಿ ಹುಟ್ಟಿಕೊಂಡಿತು. ಬಹುಕಾಲದವರೆಗೂ ಉಂಡೆಕಲ್ಲಿನ ಮಚ್ಚುಕತ್ತಿಗಳು ಉಳಿದುಬಂದರೂ ಕ್ರಮೇಣ ಹೆಚ್ಚು ಸಂಖ್ಯೆಯಲ್ಲಿ ಉತ್ಪಾದಿತವಾಗುತ್ತಿದ್ದ ಕೈಕೊಡಲಿಗಳು ಸಾಧಾರಣವಾಗಿ ಚೂಪಾದ ಮೊನೆ ಹೊಂದಿದ್ದು, ತ್ರಿಕೋನಾಕಾರ ಅಥವಾ ಅಂಡಾಕಾರವಾಗಿರುತ್ತಿದ್ದುವು. ಕೆಲಕಾಲಾನಂತರ ಅಗಲವಾದ ಮತ್ತು ಹರಿತವಾದ ಅಂಚುಗಳಿದ್ದ ಕ್ಲೀವರ್ ಕೊಡಲಿಗಳೂ ಬಳಕೆಗೆ ಬಂದುವು. ಇವಲ್ಲದೆ ಆ ಕಾಲದ ಜನರು ಬೋಲಾಸ್ ಎಂಬ ಗುಂಡುಕಲ್ಲುಗಳನ್ನು ಚರ್ಮದ ಚೀಲಗಳಲ್ಲಿ ಸುತ್ತಿ ಚರ್ಮದ ದಾರದ ತುದಿಗೆ ಕಟ್ಟಿ ಓಡುತ್ತಿದ್ದ ಬೇಟೆಪ್ರಾಣಿಗಳ ಕಾಲುಗಳಿಗೆ ಸುತ್ತಿಕೊಳ್ಳವಂತೆ ಎಸೆಯುತ್ತಿದ್ದರು. ಈಗಲೂ ಕೆಲ ಹಿಂದುಳಿದ ಜನರಲ್ಲಿ ಈ ರೀತಿಯ ಬೇಟೆಯ ಪದ್ಧತಿ ಉಳಿದುಬಂದಿದೆ. ಮತ್ತೆ ಆಯುಧನಿರ್ಮಾಣದಿಂದ ಬಂದ ಚಕ್ಕೆಕಲ್ಲುಗಳಿಂದ ಮಾಡಿದ ಇತರ ಆಯುಧಗಳನ್ನೂ ಇವರು ಬಳಸುತ್ತಿದ್ದುದಕ್ಕೆ ಹಲವಾರು ಮಾಹಿತಿಗಳು ಕಂಡುಬಂದಿವೆ. ಪ್ರಾರಂಭದೆಶೆಯ ಚಕ್ಕೆಕಲ್ಲಿನಾಯುಧಗಳಿಗೆ ನಿರ್ದಿಷ್ಟ ಆಕಾರಗಳಿಲ್ಲದಿದ್ದುದರಿಂದ ಸಂಶೋಧಕರು ಅವುಗಳಿಗೆ ಹೆಚ್ಚು ಗಮನ ಕೊಡುತ್ತಿರಲಿಲ್ಲ. ಕೆಲಕಾಲಾನಂತರ ಚಕ್ಕೆಕಲ್ಲಿನಾಯುಧಗಳೇ ಮುಖ್ಯವಾಗಿದ್ದ ಸಂಸ್ಕೃತಿಗಳು ಹುಟ್ಟಿಕೊಂಡುದರಿಂದ ಅವುಗಳ ಪ್ರಾಮುಖ್ಯತೆ ಬೆಳಕಿಗೆ ಬಂದಿತು.

                                     

3. ಕೈಕೊಡಲಿ ಆಯುಧ

ಕೈಕೊಡಲಿಗಳನ್ನು ಕಲ್ಲಿನ ಮಧ್ಯಭಾಗ ಅಥವಾ ತಿರುಳಿನಿಂದ ಮಾಡುತ್ತಿದ್ದುದರಿಂದ ಅವನ್ನು ತಿರುಳ್ಗಲ್ಲಿನ ಆಯುಧಗಳೆಂದೂ ಕೋರ್ ಟೂಲ್ಸ್‌, ಕ್ಲಾಕ್ಟೋನಿಯನ್, ಲೆವಾಲ್ವಾಸಿಯನ್ ಮೌಸ್ಟೀರಿಯನ್ ಮುಂತಾದ ಸಂಸ್ಕೃತಿಗಳನ್ನು ಚಕ್ಕೆಕಲ್ಲಿನ ಆಯುಧ ಸಂಸ್ಕೃತಿಗಳೆಂದೂ ಕರೆಯುತ್ತಾರೆ. ಆದರೆ ಕೈಕೊಡಲಿ ಸಂಸ್ಕೃತಿಯೊಂದಿಗೆ ಚಕ್ಕೆಕಲ್ಲಿನ ಆಯುಧಗಳೂ ಚಕ್ಕೆಕಲ್ಲಿನ ಆಯುಧಗಳ ಸಂಸ್ಕೃತಿಗಳೊಂದಿಗೆ ತಿರುಳ್ಗಲ್ಲಿನ ಆಯುಧಗಳೂ ಉಪಯೋಗದಲ್ಲಿದ್ದ ಅಂಶವನ್ನು ಗಮನಿಸಿದಾಗ ಈ ರೀತಿಯ ಪ್ರತ್ಯೇಕತೆ ಸರಿಯಾಗಲಾರದು. ಈ ಎರಡು ಗುಂಪಿನ ಸಂಸ್ಕೃತಿಗಳು ಯುರೋಪಿನಲ್ಲಿ ಬಹುಮಟ್ಟಿಗೆ ಸಮಕಾಲೀನವಾಗಿದ್ದು ಪರಸ್ಪರವಾಗಿ ಪ್ರಭಾವಗೊಂಡಿದ್ದುವು. ಅಷ್ಯೂಲಿಯನ್ ಸಂಸ್ಕೃತಿಯ ಅಂತ್ಯಕಾಲದ ಲೆವಾಲ್ವಾಸಿಯನ್ ಸಂಸ್ಕೃತಿಗೆ ಸೇರಿದ ಹೆರೆಯುವ ಆಯುಧಗಳೂ ಲೆವಾಲ್ವಾಸಿಯನ್ ಸಂಸ್ಕೃತಿಯಲ್ಲಿ ಸಣ್ಣಗಾತ್ರದ ಕೈ ಗೊಡಲಿಗಳೂ ನಿರ್ಮಿತವಾಗುತ್ತಿದ್ದುವು. ಕ್ಲಾಕ್ಟೋನಿಯನ್ ಸಂಸ್ಕೃತಿಯಿಂದ ಹುಟ್ಟಿಕೊಂಡ ಮೌಸ್ಟೀರಿಯನ್ ಸಂಸ್ಕೃತಿಯಲ್ಲಿ ಹೃದಯಾಕಾರದ ಸಣ್ಣ ಕೈಕೊಡಲಿಗಳು ಸಾಕಷ್ಟು ಸಂಖ್ಯೆಯಲ್ಲಿ ನಿರ್ಮಾಣವಾಗುತ್ತಿದ್ದುವು.

                                     

4. ಪೂರ್ವಶಿಲಾಯುಗ

ಪೂರ್ವಶಿಲಾಯುಗದ ಕೊನೆಯ ಭಾಗದಲ್ಲಿ ಆಯುಧ ತಯಾರಿಕೆ ಕೌಶಲ್ಯಪೂರ್ಣವಾಯಿತು. ಹಲವಾರು ರೀತಿಯ ವಿಶಿಷ್ಟವಾದ ಆಯುಧಗಳು ನಿರ್ಮಿತವಾದುವು. ಚಾಕು, ಚರ್ಮವನ್ನು ಹೆರೆಯುವ ಆಯುಧ, ಕೊರೆಯುವ ಆಯುಧ, ಉಳಿ, ಭಲ್ಲೆಯ ಮೊನೆ, ಬಾಣದ ಮೊನೆ ಮುಂತಾದ ವೈಶಿಷ್ಟ್ಯಪೂರ್ಣ ಆಯುಧಗಳು ಇತರ ಸಾಧಾರಣ ರೀತಿಯ ಆಯುಧಗಳೊಂದಿಗೆ ತಯಾರಾಗುತ್ತಿದ್ದವು. ಬ್ಲೂರಿನ್ ಎಂಬ ವಿಶೇಷವಾದ ಆಯುಧವನ್ನು ಈ ಕಾಲದಲ್ಲಿ ಕಂಡುಹಿಡಿದು, ಅದರ ಸಹಾಯದಿಂದ ಮರ, ದಂತ, ಮೂಳೆ ಮತ್ತು ಕೊಂಬುಗಳಿಂದ ಉತ್ತಮ ರೀತಿಯ ಆಯುಧೋಪಕರಣಗಳನ್ನು ತಯಾರಿಸಲು ಸಾಧ್ಯವಾಯಿತು. ಅಲ್ಲದೆ ಕೆತ್ತನೆಯ ಕಲೆಯೂ ಬೆಳೆಯುವಂತಾಯಿತು. ಈ ಕಾಲದ ಆಯುಧಗಳು ಸಾಧಾರಣವಾಗಿ ಸಣ್ಣವಾಗಿದ್ದು ಅವನ್ನು ಸುಲಭವಾಗಿ ಸ್ಥಳದಿಂದ ಸ್ಥಳಕ್ಕೆ ಹೊತ್ತುಕೊಂಡು ಹೋಗಬಹುದಾಗಿತ್ತು. ಅನಂತರದ ಕಾಲದಲ್ಲಿ ೧ ರಿಂದ ೩-೪ ಅಂಗುಲಗಳ ಉದ್ದ, ೨ ರಿಂದ ೪ ಅಂಗುಲ ಅಗಲವಿರುತ್ತಿದ್ದ ಸೂಕ್ಷ್ಮ ಶಿಲಾಯುಧಗಳು ರೂಢಿಗೆ ಬಂದವು. ಆ ಕಾಲದ ಮಾನವ ಆಯುಧ ನಿರ್ಮಾಣ ಕಲೆಯಲ್ಲಿ ಪರಿಶ್ರಮಪಡೆದಿದ್ದನೆಂಬುದನ್ನೂ ಇವು ಸೂಚಿಸುತ್ತವೆ. ಮರ ಮೂಳೆಗಳ ಹೊರ ಕಟ್ಟಿನಲ್ಲಿ ಕಲ್ಲಿನ ಕೂರಲಗುಫಲಕ ಮೊನೆಗಳನ್ನು ಜೋಡಿಸಿ ಪರಿಣಾಮಕಾರಿಯಾದ ಆಯುಧಗಳನ್ನು ತಯಾರಿಸಿ ಕುಯ್ಯಲು, ಕತ್ತರಿಸಲು, ಹೆರೆಯಲು ಮತ್ತು ಇನ್ನೂ ಹಲವಿಧ ಕಾರ್ಯಗಳಿಗೆ ಅವನ್ನು ಮಧ್ಯಶಿಲಾಯುಗ ಕಾಲದಲ್ಲಿ ಉಪಯೋಗಿಸುತ್ತಿದ್ದರು. ನವಶಿಲಾಯುಗದ ಕಾಲದಲ್ಲಿ ಆಯುಧಗಳು ಪುನಃ ದೊಡ್ಡ ಆಕಾರ ತಳೆದು ಅವುಗಳ ಅಂಚನ್ನು ಅಥವಾ ಆಯುಧವನ್ನು ಉಜ್ಜಿ ನಯಗೊಳಿಸಲಾಗುತ್ತಿತ್ತು. ಹೀಗೆ ನಯಗೊಳಿಸಿದ ಆಯುಧಗಳು ಹೆಚ್ಚು ಪರಿಣಾಮಕಾರಿಯಾಗುತ್ತಿದ್ದವು. ಇಂಥ ಮರಗಳನ್ನು ಕತ್ತರಿಸಿ ವ್ಯವಸಾಯಕ್ಕೆ ಭೂಮಿಯನ್ನು ಸಿದ್ಧಗೊಳಿಸುವುದಲ್ಲದೆ, ಮರದ ದಿಮ್ಮಿಗಳಿಂದ ಗುಡಿಸಲುಗಳನ್ನು ನಿರ್ಮಿಸಲು ಸಾಧ್ಯವಾಯಿತು. ಇದರಿಂದ ಮಾನವ ಪ್ರಾಕೃತಿಕ ವಸತಿಗಳಾದ ಪರ್ವತಗುಹೆ, ಗುಹಾಮುಖ ಅಥವಾ ತಾನು ನಿರ್ಮಿಸಿದ ಚರ್ಮದ ಗುಡಾರಗಳನ್ನು ತ್ಯಜಿಸಿ, ತನಗೆ ಅನುಕೂಲಕರವಾದ ಸ್ಥಳಗಳಲ್ಲಿ ಸುಭದ್ರವಾದ ವಸತಿಗಳನ್ನು ಸ್ಥಾಪಿಸಿಕೊಂಡು ನೆಲೆನಿಂತು ಜೀವನ ನಡೆಸಲು ಮತ್ತು ಇದರಿಂದ ವ್ಯವಸಾಯ ಪದ್ಧತಿ, ಪಶುಪಾಲನೆ, ಅವಶ್ಯವಾದ ಗೃಹೋಪಕರಣಗಳ ನಿರ್ಮಾಣ ಮುಂತಾದ ಉಪಯುಕ್ತ ಕಲೆಗಳನ್ನು ಬೆಳೆಸಿಕೊಂಡು ತನ್ನ ಅಲೆಮಾರಿಜೀವನ ಕೊನೆಗಾಣಿಸಲು ಸಾಧ್ಯವಾಯಿತು.                                     

5. ತಯಾರಿಕೆಯ ವಿಧಾನಗಳು

ಹಲವಾರು ಲಕ್ಷ ವರ್ಷಗಳಿಂದ ೩-೪ ಸಾವಿರ ವರ್ಷಗಳ ಹಿಂದಿನ ವರೆಗೂ ರೂಢಿಯಲ್ಲಿದ್ದ ಈ ಶಿಲೋಪಕರಣಗಳನ್ನು ಮಾಡುತ್ತಿದ್ದ ವಿಧಾನಗಳನ್ನು ಪ್ರತ್ಯಕ್ಷ ಪ್ರಮಾಣಗಳಿಂದ ಶ್ರುತಪಡಿಸುವುದು ಅಸಾಧ್ಯ. ಆದರೂ ಆಯುಧಗಳ ತಯಾರಿಕೆಗೆ ಬಳಸಲಾದ ವಸ್ತುಗಳು, ಆಯುಧಗಳ ಆಕಾರ, ಅವುಗಳ ಮೇಲೆ ಕಂಡುಬರುವ ಕೈಚಳಕ ಮುಂತಾದ ಅಂಶಗಳನ್ನು ಪುರಾತತ್ವಜ್ಞರು ಪರಿಶೀಲಿಸಿದ್ದಾರಲ್ಲದೆ ಈಗಲೂ ಪ್ರಪಂಚದ ಹಲಮೂಲೆಗಳಲ್ಲಿ ಶಿಲಾಯುಗ ಸಂಸ್ಕೃತಿ ಮಟ್ಟದಲ್ಲಿ ವಾಸಿಸುತ್ತಿರುವ ಆದಿಮ ಜನಾಂಗಗಳು ಆಯುಧ ತಯಾರಿಸುವ ರೀತಿಗಳನ್ನು ಅಭ್ಯಾಸ ಮಾಡಿದ್ದಾರೆ. ಇವುಗಳ ತಯಾರಿಕೆಯಲ್ಲಿ ಪ್ರಾಚೀನ ಮಾನವರು ಬಳಸಿರಬಹುದಾದ ಹಲವಾರು ವಿಧಾನಗಳನ್ನು ಪುರಾತತ್ವಜ್ಞರು ಗುರುತಿಸಿದ್ದಾರೆ. ಈ ವಿಧಾನಗಳನ್ನು ಬಳಸಿಕೊಂಡು ಆ ರೀತಿಯ ಆಯುಧೋಪಕರಣಗಳನ್ನು ನಿರ್ಮಿಸಲು ಸಾಧ್ಯವೇ ಎಂದು ಆನಂತರ ಪ್ರಯೋಗ ನಡೆಸಿ ಖಚಿತಗೊಳಿಸಿಕೊಂಡಿದ್ದಾರೆ. ಆದುದರಿಂದ ಶಿಲಾಯುಗ ಮಾನವ ಬಳಸಿದ ವಿಧಾನಗಳಿಗೂ ಈ ವಿಧಾನಗಳಿಗೂ ಹೆಚ್ಚು ವ್ಯತ್ಯಾಸವಿರಲಾರದೆಂದು ಭಾವಿಸಬೇಕಾಗುತ್ತದೆ.

                                     

6. ಆದಿಮಾನವ

ಸದಾ ಆಹಾರಸಂಪಾದನೆಯಲ್ಲೇ ನಿರತನಾಗಿರಬೇಕಾಗಿದ್ದ ಆದಿಮಾನವ ತನ್ನ ಕಾರ್ಯಸಾಧನೆಗೆ ಬೇಕಾದ ಆಯುಧಗಳ ನಿರ್ಮಾಣಕ್ಕೆ ಅತ್ಯಾವಶ್ಯಕವಾದ ಕನಿಷ್ಠ ಪ್ರಮಾಣದ ಪ್ರಯತ್ನ ಮತ್ತು ಕಾಲವನ್ನು ವಿನಿಯೋಗಿಸಿರಬಹುದಷ್ಟೆ. ಪೂರ್ವ ಶಿಲಾಯುಗದ ಪ್ರಾರಂಭ ಹಂತದ ಆಯುಧೋಪಕರಣಗಳು ಇದಕ್ಕೆ ನಿದರ್ಶನ. ಇವು ಪ್ರಾಕೃತಿಕವಾಗಿ ಒಡೆದ ಕಲ್ಲ್ಲುಗಳನ್ನೇ ಹೋಲುತ್ತವೆ. ಪ್ರಾಣಿಗಳ ಚರ್ಮವನ್ನು ಕತ್ತರಿಸಿ ಮಾಂಸವನ್ನು ಕುಯ್ದು ಸಣ್ಣ ತುಂಡುಗಳಾಗಿ ಮಾಡಲು ಮತ್ತು ಭೂಮಿಯನ್ನು ಅಗೆದು ಗೆಡ್ಡೆಗೆಣಸುಗಳನ್ನು ಹೊರತೆಗೆಯಲು ಚೂಪಾದ ಮತ್ತು ಮೊನಚಾದ ಯಾವುದೇ ಕಲ್ಲನ್ನು ಉಪಯೋಗಿಸುತ್ತಿದ್ದಿರಬಹುದು. ಆ ರೀತಿಯ ಚೂಪಾದ, ಮೊನಚಾದ ಕಲ್ಲುಗಳು ದೊರಕದಿದ್ದಾಗ ಮಾನವ ತನ್ನ ಪರಿಸರದಲ್ಲಿ ದೊರಕುವ ಕಲ್ಲುಗಳನ್ನು ಮತ್ತೊಂದು ಕಲ್ಲಿನಿಂದ ಒಡೆದು ಆ ರೀತಿಯ ಅಂಚುಗಳನ್ನು ನಿರ್ಮಿಸುತ್ತಿದ್ದಿರಬಹುದು. ಇದನ್ನು ಶಿಲಾ ವಿಧಾನವೆಂದು ಕರೆಯಲಾಗಿದೆ. ಶಿಲಾವಿಧಾನದಲ್ಲಿ ಎರಡು ಉಪವಿಧಾನಗಳನ್ನು ಗುರುತಿಸಲಾಗಿದೆ. ಆಯುಧನಿರ್ಮಾಣಕ್ಕೆ ಉಪಯೋಗಿಸುವ ಉಂಡೆಕಲ್ಲಿನ ಚಪ್ಪಟೆಯಾದ ಪಾಶರ್ವ್‌ದ ಮೇಲೆ ಸುತ್ತಿಗೆ ಕಲ್ಲಿನಿಂದ ಬಲವಾಗಿ ಹೊಡೆದು ಚಕ್ಕೆಗಳನ್ನು ತೆಗೆಯುವುದು ಮತ್ತು ಭೂಮಿಯಲ್ಲಿ ಬಲವಾಗಿ ನೆಟ್ಟಿರುವ ಬಂಡೆಕಲ್ಲಿನ ಮೇಲೆ ಉಂಡೆಕಲ್ಲನ್ನು ಹೊಡೆದು ಚಕ್ಕೆಗಳನ್ನು ತೆಗೆಯುವುದು. ಡೊಂಕಾಗಿದ್ದ ಹೊರಮೈ ಹಳ್ಳತಿಟ್ಟುಗಳಿಂದ ಕೂಡಿದ್ದರೂ ಚೂಪಾದ ಅಂಚುಗಳಿದ್ದ ಅಬೆವಿಲಿಯನ್ ರೀತಿಯ ಕೈಗೊಡಲಿಗಳನ್ನು ಈ ವಿಧಾನಗಳಿಂದ ಕಾಲಕ್ರಮೇಣ ತಯಾರಿಸತೊಡಗಿದರು. ತಯಾರಿಸಲು ಮೊದಲು ಶಿಲಾವಿಧಾನದಿಂದ ತಯಾರಾದ ಒರಟಾದ ಆಯುಧಗಳ ಅಂಚುಗಳಿಂದಲೂ ವರ್ತುಲ ಸ್ತಂಭಾಕೃತಿಯ ಸಿಲಿಂಡ್ರಿಕಲ್ ಮೃದುವಾದ ಮರದ ಅಥವಾ ಮೂಳೆಯ ಸುತ್ತಿಗೆಯಿಂದಲೂ ಸಣ್ಣ, ತೆಳ್ಳನೆಯ ಚಕ್ಕೆಗಳನ್ನು ತೆಗೆದು, ಅಂಚುಗಳನ್ನು ನೇರವಾಗಿಸಿ, ನೋಡಲು ಅಂದವೂ ಹೆಚ್ಚು ಪರಿಣಾಮಕಾರಿಯೂ ಆದ ಕೊಡಲಿಗಳನ್ನು ತಯಾರಿಸುತ್ತಿದ್ದರು. ಅಷ್ಯೂಲಿಯನ್ ಹಂತದ ಕೈಗೊಡಲಿಗಳನ್ನು ತಯಾರಿಸಲು ಮೊದಲು ಇವು ತಯಾರಾದುವು. ಹಾಗೆಯೆ ಆಯುಧಗಳನ್ನು ಮಾಡಲು ಸಾಧ್ಯವಾಯಿತು.                                     

7. ಮೆಟ್ಟಿಲು ಮೆಟ್ಟಿಲಾಗಿ ಚಕ್ಕೆಗಳನ್ನು ತೆಗೆಯುವ ವಿಧಾನ ಸ್ಟೆಪ್-ಫ್ಲೇಕಿಂಗ್

ಇದೇ ಸುಮಾರಿನಲ್ಲಿ ಬಳಕೆಗೆ ಬಂದ ಮತ್ತೊಂದು ವಿಧಾನವೆಂದರೆ ಮೆಟ್ಟಿಲು ಮೆಟ್ಟಿಲಾಗಿ ಚಕ್ಕೆಗಳನ್ನು ತೆಗೆಯುವ ವಿಧಾನ ಸ್ಟೆಪ್-ಫ್ಲೇಕಿಂಗ್. ಈ ವಿಧಾನದಲ್ಲಿ ಮೊಂಡಾದ ಆಯುಧಗಳ ಅಂಚಿನಿಂದ ಸಣ್ಣ ಚಕ್ಕೆಗಳನ್ನು ತೆಗೆದು ಚೂಪುಗೊಳಿಸುತ್ತಿದ್ದರು. ಆದರೆ ಹೊಡೆತದ ಶಕ್ತಿ ಮಿತವಾಗಿದ್ದು ಸ್ವಲ್ಪ ಒಳಭಾಗಕ್ಕೆ ಹೋಗುವ ವೇಳೆಗೆ ಸತ್ವಹೀನವಾಗಿ, ಚಕ್ಕೆ ಮುರಿದು ಮೆಟ್ಟಿಲಿನಂತೆ ಕಾಣುವ ಉಬ್ಬು ಪ್ರದೇಶ ನಿರ್ಮಾಣವಾಗುತ್ತಿತ್ತು. ಈ ರೀತಿಯ ಮೆಟ್ಟಿಲುಗಳನ್ನು ಅನೇಕ ಅಷ್ಯೂಲಿಯನ್ ಕೈಗೊಡಲಿಗಳ ಮೇಲೆ ಕಾಣಬಹುದು. ಮಧ್ಯ ಮತ್ತು ಅಂತ್ಯಭಾಗದ ಅಷ್ಯೂಲಿಯನ್ ಆಯುಧಗಳ ಮೊನೆಗಳನ್ನು ಚೂಪುಗೊಳಿಸಲು ಮತ್ತೊಂದು ವಿಧಾನ ಬಳಕೆಗೆ ಬಂತು. ಚೂಪಾದ ಸುತ್ತಿಗೆಕಲ್ಲಿನ ಮೊನೆಯನ್ನು ಆಯುಧದಂಚಿನಲ್ಲಿ ನಿಲ್ಲಿಸಿ ದೈಹಿಕ ಶಕ್ತಿಯಿಂದ ಬಲವಾಗಿ ಒತ್ತಡ ಕೊಟ್ಟು ಪ್ರಷರ್ ಫ್ಲೇಕಿಂಗ್ ಸಣ್ಣ ತೆಳು ಚಕ್ಕೆಗಳನ್ನು ತೆಗೆದು ಅಂಚುಗಳನ್ನು ಚೂಪುಗೊಳಿಸುತ್ತಿದ್ದರು. ಪೂರ್ವಶಿಲಾಯುಗದ ಅಂತ್ಯಕಾಲದಲ್ಲಿ ಬಳಕೆಗೆ ಬಂದ ತೆಳುವಾದ ಮತ್ತು ಕಲ್ಲು ಪಟ್ಟಿಕೆಗಳನ್ನು ತೆಗೆಯಲು ಪ್ರಮುಖವಾಗಿ ಉಪಯೋಗಿಸಲಾಗುತ್ತಿದ್ದ ಮತ್ತೊಂದು ವಿಧಾನವನ್ನು ನಿಯಂತ್ರಿತ ಚಕ್ಕೆ ತೆಗೆಯುವ ವಿಧಾನ ಕಂಟ್ರೋಲ್ಡ್‌ ಫ್ಲೇಕಿಂಗ್ ಎಂದು ಕರೆಯಲಾಗಿದೆ. ಇದರಲ್ಲಿ ಕೆಲವು ಉಪವಿಧಾನಗಳೂ ಬಳಕೆಯಲ್ಲಿದ್ದುವು. ಇದರ ಮುಖ್ಯ ಅಂಶವೆಂದರೆ ಚೂಪಾದ ಮೊನೆಯುಳ್ಳ ಸುತ್ತಿಗೆಕಲ್ಲಿನಿಂದ ಚಕ್ಕೆಗಳನ್ನು ತೆಗೆಯಬೇಕಾದ ಕಲ್ಲಿನ ಅಂಚಿನ ಮೇಲೆ ಹೊಡೆಯುವುದು ; ಆ ಹೊಡೆತದ ಶಕ್ತಿಯನ್ನು ನಿರ್ದಿಷ್ಟ ದಿಕ್ಕಿನಲ್ಲಿ ಹೋಗುವಂತೆ ನಿಯಂತ್ರಿಸುವುದು. ಚಕ್ಕೆ ತೆಗೆಯಬೇಕಾದ ಕಲ್ಲನ್ನು ಮೊಣಕಾಲಿನ ಮೇಲಾಗಲಿ ಮರದ ತುಂಡಿನ ಮೇಲಾಗಲಿ ನೆಲದಲ್ಲಿ ಮಾಡಿದ ಹಳ್ಳದಲ್ಲಾಗಲಿ ಭದ್ರವಾಗಿ ಅಲುಗಾಡದಂತೆ ಸಿಕ್ಕಿಸಿ ಚೂಪಾದ ಸುತ್ತಿಗೆ ಮೊನೆಯಿಂದ ಹೊಡೆಯುವುದರಿಂದ ಹೊರಬರುವ ಚಕ್ಕೆಯ ಗಾತ್ರ ಮತ್ತು ಕೋನವನ್ನು ಹತೋಟಿಯೊಳಗಿಡಬಹುದಾಗಿತ್ತು. ಪೂರ್ವಶಿಲಾಯುಗದ ಅಂತ್ಯ ಮತ್ತು ಅನಂತರ ಕಾಲಗಳಲ್ಲಿ ವಿಶೇಷವಾಗಿ ಬಳಕೆಯಲ್ಲಿದ್ದ ಈ ವಿಧಾನವನ್ನು ಸಣ್ಣದಾದ ಸುತ್ತಿಗೆಯಿಂದ ಮೆದುವಾದ ಏಟುಗಳನ್ನು ಕೊಟ್ಟು ಚಕ್ಕೆಗಳನ್ನು ತೆಗೆದು ಚೂಪುಗೊಳಿಸಲು ಮಾತ್ರ ಉಪಯೋಗಿಸುತ್ತಿದ್ದಿರಬೇಕು.                                     

8. ಹಳೆಯ ಶಿಲಾಯುಗ

ಇಂಗ್ಲೆಂಡು ಮತ್ತು ಯುರೋಪಿನ ಹಲವಾರು ಭಾಗಗಳಲ್ಲಿ ಹಳೆಯ ಶಿಲಾಯುಗದಲ್ಲಿ ಉಂಡೆ ಮತ್ತು ತಿರುಳ್ಗಲ್ಲಿನ ಆಯುಧ ಸಂಸ್ಕೃತಿಗಳ ಸಮಕಾಲೀನವಾದ ಮತ್ತು ಸ್ವತಂತ್ರವಾದ ಚಕ್ಕೆ ಕಲ್ಲಿನಾಯುಧಗಳ ಸಂಸ್ಕೃತಿಗಳೂ ನೆಲೆಸಿದ್ದುವು. ಪ್ರಪಂಚದ ಇತರ ಭಾಗಗಳಲ್ಲಿ ಈ ಚಕ್ಕೆ ಕಲ್ಲಿನಾಯುಧಗಳ ಸಂಸ್ಕೃತಿಗಳು ಇತರ ಸಂಸ್ಕೃತಿಗಳ ಅವಿಭಾಜ್ಯ ಅಂಗಗಳಾಗಿರುತ್ತಿದ್ದುವು. ಇವುಗಳಲ್ಲಿ ಅತ್ಯಂತ ಪುರಾತನವಾದವೆಂದು ಹೇಳಲಾದ ಕ್ಲಾಕ್ಟೋನಿಯನ್ ಇಂಗ್ಲೆಂಡಿನ ಕ್ಲಾಕ್ಟನ್-ಆನ್-ಸೀ ಎಂಬಲ್ಲಿ ಮೊದಲ ಬಾರಿಗೆ ಗುರುತಿಸಿದುದರಿಂದ ಆ ಹೆಸರು ಕೊಡಲಾಗಿದೆ ವಿಧಾನದಲ್ಲಿ, ಪ್ರಾಕೃತಿಕವಾಗಿ ದೊರಕುವ-ಸ್ವಲ್ಪಮಟ್ಟಿಗೆ ಸಮತಟ್ಟಾದ ಪ್ರದೇಶಗಳಲ್ಲಿರುವ-ಕಲ್ಲಿನ ಮೇಲೆ ಕಲ್ಲು ಸುತ್ತಿಗೆಯಿಂದ ಹೊಡೆದು ಚಕ್ಕೆಗಳನ್ನು ತೆಗೆಯುತ್ತಿದ್ದರು. ಚಕ್ಕೆಯ ತಳಬದಿಯಲ್ಲಿ ಏಟುಬಿದ್ದ ಸ್ಥಳದಲ್ಲಿ ಬುಗರಿಯಾಕಾರದ ಉಬ್ಬುಪ್ರದೇಶವೂ ಅಲ್ಲಿಂದ ಮುಂದೆ ಅಲೆಅಲೆಯಾದ ಸುರುಳಿಗಳೂ ಕಂಡುಬರುತ್ತವೆ. ಚಕ್ಕೆ ಶಂಕುವಿನಾಕಾರದಲ್ಲಿದ್ದು ಬುಡದಲ್ಲಿ ದಪ್ಪನಾಗಿಯೂ ತುದಿಗಳಲ್ಲಿ ತೆಳ್ಳಗೂ ಇರುತ್ತದೆ. ಮತ್ತುಹೊಡೆಯುವ ಸಮತಟ್ಟಾದ ಪ್ರದೇಶದಿಂದ ಚಕ್ಕೆಯ ತಳಬದಿಯ ಕೋನ ೯೦ಲಿ ಗಳಿಂದ ೧೨೦ಲಿ ಗಳಷ್ಟಿರುತ್ತದೆ. ಅನಂತರ ಈ ಚಕ್ಕೆಗಳ ಅಂಚುಗಳನ್ನು ಚೂಪು ಮಾಡಿಯೋ ಬೇರೆ ವಿಧಾನಗಳಿಂದಲೋ ತಮಗೆ ಬೇಕಾದ ಹೆರೆಯುವ ಅಥವಾ ಕೊರೆಯುವ ಆಯುಧ, ಮೊನೆ ಮುಂತಾದ ಉಪಕರಣಗಳನ್ನು ತಯಾರಿಸಿಕೊಳ್ಳುತ್ತಿದ್ದರು.

                                     

9. ಪೂರ್ವಶಿಲಾಯುಗದ ಮಧ್ಯಕಾಲ

ಪೂರ್ವಶಿಲಾಯುಗದ ಮಧ್ಯಕಾಲದಲ್ಲಿ ಬಳಕೆಗೆ ಬಂದ ಲೆವಾಲ್ವಾಸಿಯನ್ ವಿಧಾನದಲ್ಲಿ ಪ್ಯಾರಿಸ್ ಬಳಿಯ ಲೆವಾಲ್ವಾ ಪೆರ್ರೆ ಎಂಬಲ್ಲಿ ಮೊದಲು ಗುರುತಿಸಿದುದರಿಂದ ಈ ಹೆಸರು ಏರುಪೇರಾದ ಮೇಲ್ಮೈಯುಳ್ಳ ಉಂಡೆಕಲ್ಲಿನ ಹೊರವಲಯಗಳಿಂದ ಸಣ್ಣ ಚಕ್ಕೆಗಳನ್ನು ತೆಗೆದು ಸಮತಟ್ಟಾದ ತಿರುಳ್ಗಲ್ಲನ್ನು ಮಾಡಿಕೊಳ್ಳುತ್ತಿದ್ದರು. ಅನಂತರ ಒಂದು ತುದಿಯಲ್ಲಿ ಎಲ್ಲ ದಿಕ್ಕಿನಿಂದಲೂ ಸಣ್ಣ ಚಕ್ಕೆಗಳನ್ನು ತೆಗೆದು ಸಮವಾದಜಗತಿಯನ್ನು ನಿರ್ಮಿಸಿಕೊಳ್ಳುತ್ತಿದ್ದರು. ಅವಶ್ಯವಾದ ಆಯುಧದ ಆಕಾರವನ್ನು ಉಂಡೆಕಲ್ಲಿನ ಆ ಪಾಶರ್ವ್‌ದ ಮೇಲೆ ರೂಪಿಸಿಕೊಂಡು ಅನಂತರ ನೇರ ಹೊಡೆತದಿಂದಲೋ ಮೊನೆಯಾದ ಸುತ್ತಿಗೆಯನ್ನು ಮಧ್ಯವರ್ತಿಯಾಗಿಟ್ಟುಕೊಂಡೋ ಒಂದೇ ಹೊಡೆತದಿಂದ ಚಕ್ಕೆಯನ್ನು ಬೇರ್ಪಡಿಸುತ್ತಿದ್ದರು. ಇಂಥ ಚಕ್ಕೆಕಲ್ಲಿನಾಯುಧದ ತಳಭಾಗ ಒಂದೇ ಸಮವಾಗಿದ್ದು, ಮೇಲ್ಬದಿಯಲ್ಲಿ ಮಾತ್ರ ತಯಾರಿಕೆಯ ಕಾಲದಲ್ಲುಂಟಾದ ಗುರುತುಗಳು ಕಂಡುಬರುತ್ತವೆ. ಇಂಥ ಚಕ್ಕೆಗಳು ಸಾಧಾರಣವಾಗಿ ತೆಳುವಾಗಿಯೂ ತ್ರಿಕೋನ ಅಥವಾ ದೀರ್ಘವೃತ್ತಾಕಾರವಾಗಿಯೂ ಇರುತ್ತಿದ್ದವು. ಚಕ್ಕೆಯ ತಳಬದಿಯ ಕೋನ ೮೦ -೯೦ ಇರುತ್ತಿತ್ತು. ಮೌಸ್ಟೀರಿಯನ್ ಸಂಸ್ಕೃತಿಕಾಲದಲ್ಲಿ ಮತ್ತೊಂದು ವಿಧಾನ ಬೆಳಕಿಗೆ ಬಂತು. ಈ ವಿಧಾನದಲ್ಲಿ ಸಮವಾದ ಒಂದು ಪಾಶರ್ವ್‌ವಿದ್ದ ದೊಡ್ಡದಾದ ಒಂದು ಚಕ್ಕೆಕಲ್ಲನ್ನೋ ಅದೇ ರೀತಿಯ ಬೇರೆ ಕಲ್ಲನ್ನೋ ತೆಗೆದುಕೊಂಡು, ಆ ಸಮಪ್ರದೇಶದ ಮೇಲೆ ಹೊಡೆತ ಕೊಟ್ಟು ಸಣ್ಣದಾದ ಚಕ್ಕೆಗಳನ್ನು ಬೇರ್ಪಡಿಸುತ್ತಿದ್ದರು. ಈ ವಿಧಾನದಲ್ಲಿ ಒಂದು ಕಲ್ಲಿನಿಂದ ಅನೇಕ ಚಕ್ಕೆಗಳನ್ನು ತೆಗೆಯಲು ಸಾಧ್ಯವಾಗುತ್ತಿತ್ತು. ಸಾಧ್ಯವಾದಷ್ಟು ಹೆಚ್ಚು ಚಕ್ಕೆಗಳನ್ನು ತೆಗೆದ ಅನಂತರ ಉಳಿದ ತಿರುಳಿನ ಮಧ್ಯಭಾಗ ಚಪ್ಪಟಯಾಗಿದ್ದು, ಸುತ್ತಂಚುಗಳು ಚೂಪಾಗಿರುತ್ತಿದ್ದವು. ಇದನ್ನು ಚಕ್ರಾಕಾರದ ತಿರುಳ್ಗಲ್ಲು ಡಿಸ್ಕಾಯಿಡ್ ಕೋರ್ ಎನ್ನುತ್ತಾರೆ.

                                     

10. ಮಧ್ಯಶಿಲಾಯುಗ ಕಾಲ

ಅನಂತರದ ಮಧ್ಯಶಿಲಾಯುಗ ಕಾಲದಲ್ಲಿ ಮೇಲಿನ ಎಲ್ಲ ವಿಧಾನಗಳೂ ಬಳಕೆಯಲ್ಲಿದ್ದುವಲ್ಲದೆ. ಕೂರಲಗು ಫಲಕ ಬ್ಲೇಡ್ ವಿಧಾನವೂ ರೂಢಿಗೆ ಬಂತು. ಕೊರಲಗು ಫಲಕ ತೆಳ್ಳಗೂ ಸೂಕ್ಷ್ಮವಾಗಿಯೂ ಇರುತ್ತದೆ. ಇದನ್ನು ದೀರ್ಘವೃತ್ತಾಕಾರದ ಹಲಮುಖಗಳುಳ್ಳ ತಿರುಳ್ಗಲ್ಲಿನಿಂದ ತೆಗೆಯುತ್ತಿದ್ದುದರಿಂದ ಇದು ಉದ್ದವಾಗಿ, ಕಡಿಮೆ ಅಗಲವುಳ್ಳದ್ದಾಗಿ ಇರುತ್ತದೆ. ಮೇಲ್ತುದಿಯಲ್ಲಿ ಸಣ್ಣ ಸಣ್ಣ ಚಕ್ಕೆಗಳನ್ನು ತೆಗೆದ ಚಿಹ್ನೆಗಳು ಕಂಡುಬರುತ್ತದೆ. ಈ ವಿಧಾನದಲ್ಲಿ ಹೊಡೆತವನ್ನು ನೇರವಾಗಿ ಕೊಡದೆ ಮರ ಅಥವಾ ಮೂಳೆಯ ಚೂಪಾದ ಆಯುಧವನ್ನು ಮಧ್ಯವರ್ತಿಯಾಗಿ ಉಪಯೋಗಿಸಿ ಒತ್ತಡವನ್ನು ಕೊಟ್ಟು ಫಲಕಗಳನ್ನು ಬೇರ್ಪಡಿಸುತ್ತಿದ್ದರು. ಈ ವಿಧಾನ ನವಶಿಲಾಯುಗ ಮತ್ತು ತಾಮ್ರಶಿಲಾಯುಗ ಕಾಲಗಳಲ್ಲೂ ಬಳಕೆಯಲ್ಲಿ ಮುಂದುವರಿಯಿತು. ಈ ಕಾಲದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಫಲಕಗಳನ್ನು ತಯಾರಿಸಲು ಒಂದು ಹೊಸ ರೀತಿಯ ನೇರ ಹೊಡೆತದ ವಿಧಾನವನ್ನು ಬಳಸುತ್ತಿದ್ದರು. ತಿರುಳ್ಗಲ್ಲನ್ನು ಮೊದಲು ಸಿದ್ದಪಡಿಸಿಕೊಳ್ಳುತ್ತಿದ್ದರು. ನುಣುಪಾದ ಮೇಲ್ಪದರದ ಶಿಲೆಗಳನ್ನು ಉದ್ದಿಶ್ಯಪೂರ್ವಕವಾಗಿ ಒರಟಾಗಿಸುತ್ತಿದ್ದರು. ಅನಂತರ ತಿರುಳ್ಗಲ್ಲಿನ ತುದಿಗಳಲ್ಲಿ ಸಮನಾದ ಪ್ರದೇಶಗಳನ್ನು ನಿರ್ಮಿಸುತ್ತಿದ್ದರು. ಈ ಜಗತಿಗಳು ಸರಳವಾಗಿಯೋ ಬಹುಮುಖವಾಗಿಯೋ ಇರಬಹುದಾಗಿತ್ತು. ಇಂಥ ತಿರುಳ್ಗಲ್ಲಿಗೆ ಪಟ್ಟೆಗಳುಳ್ಳ ತಿರುಳ್ಗಲ್ಲೆಂದು ಫೇಸೆಟೆಡ್ ಕೋರ್ ಕರೆಯಲಾಗುತ್ತದೆ. ಅನಂತರ ಅದರ ಒಂದು ಪಾಶರ್ವ್‌ದುದ್ದಕ್ಕೂ ಎರಡು ವಿರುದ್ಧ ದಿಕ್ಕುಗಳಿಂದ ಸಣ್ಣ ಸಣ್ಣ ಚಕ್ಕೆಗಳನ್ನು ತೆಗೆದು ಏಣುಳ್ಳ ಗೆರೆಯೊಂದನ್ನು ನಿರ್ಮಿಸುತ್ತಿದ್ದರು. ಅನಂತರ ಚೂಪಾದ ಉಪಕರಣವೊಂದರ ಮೊನೆಯನ್ನು ಫಲಕ ತೆಗೆಯಬೇಕಾದ ಸ್ಥಳದಲ್ಲಿ ಊರಿ ಮರದ ಸುತ್ತಿಗೆಯಿಂದ ಆ ಉಪಕರಣದ ಇನ್ನೊಂದು ತುದಿಯ ಮೇಲೆ ಹೊಡೆದರೆ ತೆಳುವಾದ ಉದ್ದವಾದ ಪಟ್ಟಿಕೆಯೊಂದು ಏಳುತ್ತಿತ್ತು. ಮತ್ತು ತಿರುಳ್ಗಲ್ಲಿನ ಮೇಲೆ ಹೊರಬಿದ್ದ ಪಟ್ಟಿಕೆಯ ಎರಡೂ ಅಂಚುಗಳಿಗೆ ಸೇರಿದಂತೆ ಎರಡು ಏಣುಳ್ಳ ಗೆರೆಗಳು ರೂಪುಗೊಳ್ಳುತ್ತಿದ್ದವು. ಮತ್ತೆ ಅವುಗಳನ್ನನುಸರಿಸಿ ಮತ್ತೆರಡು ಪಟ್ಟಿಕೆಗಳನ್ನು ತೆಗೆದರೆ ನಾಲ್ಕು ಏಣುಳ್ಳ ಗೆರೆಗಳು ಏರ್ಪಡುತ್ತಿದ್ದವು. ಈ ವಿಧಾನ ಈಗಲೂ ಹಲವಾರು ಹಿಂದುಳಿದ ಪಂಗಡಗಳಲ್ಲಿ ಬಳಕೆಯಲ್ಲಿದೆ ; ಮತ್ತು ಗುಜರಾತ್ ರಾಜ್ಯದ ಕ್ಯಾಂಬೆಯಲ್ಲಿ ಕಲ್ಲಿನ ಮಣಿಗಳನ್ನು ತಯಾರಿಸಲು ಅನುಸರಿಸುವ ವಿಧಾನ ಇದೇ.                                     

11. ಕೊರಲಗು ಪಟ್ಟಿಕೆ

ಕೊರಲಗು ಪಟ್ಟಿಕೆಗಳನ್ನು ತಯಾರಿಸುವಾಗ ಮೇಲಿನ ವಿಧಾನದಲ್ಲಿ ನೇರ ಹೊಡೆತವನ್ನು ಉಪಯೋಗಿಸುವ ಬದಲು, ಮೊನೆಯಾದ ಉಪಕರಣದ ಮೇಲೆ ತಯಾರಿಸುವವನ ದೇಹದ ಒತ್ತಡವನ್ನು ಉಪಯೋಗಿಸುವ ಮೂಲಕ ಪಟ್ಟಿಕೆಗಳನ್ನು ತೆಗೆಯುತ್ತಿದ್ದರು. ಒಂದು ಬಲವಾದ ಕೋಲಿನ ತುದಿಗೆ ಚೂಪಾದ ಮೂಳೆ ಅಥವಾ ಕೊಂಬಿನ ಆಯುಧವೊಂದನ್ನು ಸಿಕ್ಕಿಸಿ ಚರ್ಮದ ಹುರಿಗಳಿಂದ ಅದನ್ನು ಭದ್ರಪಡಿಸುತ್ತಿದ್ದರು. ಅದರ ಇನ್ನೊಂದು ತುದಿಗೆ ಅಡ್ಡಪಟ್ಟಿಯೊಂದನ್ನು ಸಿಕ್ಕಿಸಿ, ಆ ಅಡ್ಡಪಟ್ಟಿಯ ಮೇಲೆ ಎದೆಯಿಂದ ಒತ್ತಡ ಕೊಡುತ್ತಿದ್ದರು. ಎರಡು ಕೈಗಳಿಂದ ಕೋಲನ್ನು ಕದಲದಂತೆ ಹಿಡಿಯಬೇಕಾಗುತ್ತಿತ್ತು ; ಮತ್ತು ಎರಡೂ ಪಾದಗಳಿಂದ ತಿರುಳ್ಗಲ್ಲನ್ನು ಸರಿಯಾದ ಸ್ಥಾನದಲ್ಲಿ ಹಿಡಿದಿರಬೇಕಾಗುತ್ತಿತ್ತು. ಈ ವಿಧಾನ ಈಗಲೂ ಅಮೆರಿಕದ ಇಂಡಿಯನರಲ್ಲಿ ಬಳಕೆಯಲ್ಲಿದೆ.ಕಲ್ಲಿನ ಆಯುಧಗಳ ಅಂಚುಗಳನ್ನು ಹೆಚ್ಚು ಪ್ರಯೋಜನಕಾರಿಯಾಗಿ ಮಾಡಲು ಕೆಲವು ಬಾರಿ ಆ ಅಂಚುಗಳಿಂದ ಸಣ್ಣ ಸಣ್ಣ ಚೂರುಗಳನ್ನು ತೆಗೆದು ಅವುಗಳನ್ನುಚೂಪಾಗಿಯೋ ಬಲಯುತವಾಗಿಯೋ ಮಾಡುತ್ತಿದ್ದುದುಂಟು. ಭದ್ರವಾಗಿ ನಿಂತಿರುವ ಮತ್ತೊಂದು ಕಲ್ಲಿನ ಅಥವಾ ಮರದ ತುಂಡಿನ ಮೇಲೆ ನಿಧಾನವಾಗಿ ಆಯುಧದ ಕಲ್ಲನ್ನು ಹೊಡೆದು ಅಥವಾ ಮೃದುವಾದ ಸಣ್ಣ ಮರ ಅಥವಾ ಮೂಳೆಯ ಸುತ್ತಿಗೆಯಿಂದ ಅದಕ್ಕೆ ಹೊಡೆದು ಚೂರುಗಳನ್ನು ಹಾರಿಸಿ ಇದನ್ನು ತಯಾರಿಸುತ್ತಿದ್ದರು. ಪೂರ್ವಶಿಲಾಯುಗದ ಮಧ್ಯಕಾಲದಿಂದ ಸೂಕ್ಷ್ಮ ಶಿಲಾಯುಗದ ವರೆಗೂ ಈ ಪದ್ದತಿ ಬಳಕೆಯಲ್ಲಿದ್ದು ಪೂರ್ವಶಿಲಾಯುಗದ ಅಂತ್ಯಕಾಲದಲ್ಲಿ ಬಹಳ ಪ್ರಬಲವಾಗಿತ್ತು. ಅನಂತರ ಕ್ರಮೇಣ ತಾಮ್ರಶಿಲಾಯುಗದ ಕಾಲದಲ್ಲಿ ಕ್ಷೀಣಿಸಿತು.

                                     

12. ನವಶಿಲಾಯುಗ ಕಾಲ

ನವಶಿಲಾಯುಗ ಕಾಲದಲ್ಲಿ ದೊಡ್ಡ ಗಾತ್ರದ ನುಣುಪಾದ ಮತ್ತು ಫಲಕಾರಿಯಾದ ಆಯುಧಗಳು ಬಳಕೆಗೆ ಬಂದವು. ಆ ವರೆಗಿನ ಆಯುಧೋಪಕರಣಗಳು ಒರಟಾದ ಮೇಲ್ಮೈ ಹೊಂದಿರುತ್ತಿದ್ದವು. ಆದರೆ ಆ ಕಾಲದಲ್ಲಿ ಆಯುಧಗಳನ್ನು ನಯಗೊಳಿಸಿ ಉಪಯೋಗಿಸುತ್ತಿದ್ದರು. ತಯಾರಿಸಬೇಕಾದ ಆಯುಧದ ಆಕಾರಕ್ಕೆ ಹೆಚ್ಚು ಸಾಮೀಪ್ಯ ಹೊಂದಿರುವ ಕಲ್ಲುಗಳನ್ನು ಆಯ್ದುಕೊಂಡು ಕಡಿಮೆ ಶ್ರಮದಿಂದ ಆಯುಧಗಳನ್ನು ತಯಾರಿಸುತ್ತಿದ್ದರು. ಆಯುಧ ತಯಾರಿಸುವ ಶಿಲೆ ಮರಳ್ಗಲ್ಲಿನಂಥ ಮೃದು ಶಿಲೆಯಾಗಿದ್ದರೆ ಮತ್ತು ಅದು ತಯಾರಿಸಬೇಕಾದ ಆಯುಧವನ್ನು ಹೋಲುತ್ತಿದ್ದರೆ, ಅದರ ಅಂಚನ್ನು ಎಚ್ಚರಿಕೆಯಿಂದ ಕಠಿಣವಾದ ಮತ್ತೊಂದು ಕಲ್ಲಿನ ಮೇಲೆ ಉಜ್ಜಿ ಚೂಪಾದ ಅಂಚನ್ನು ನಿರ್ಮಿಸುತ್ತಿದ್ದರು. ಹಾಗಿಲ್ಲದಿದ್ದಾಗ ಮೂರು ಅಥವಾ ನಾಲ್ಕು ಹಂತಗಳ ಈ ಕೆಳಗಿನ ವಿಧಾನವನ್ನು ಬಳಸುತ್ತಿದ್ದರು: ಒಂದು ಉಂಡೆ ಅಥವಾ ಚಕ್ಕೆಕಲ್ಲಿನಿಂದ ಶಿಲಾವಿಧಾನದ ರೀತ್ಯಾ ತಯಾರಿಸಬೇಕಾದ ಆಯುಧದ ಕಚ್ಚಾರೂಪವನ್ನು ಸಿದ್ದಪಡಿಸುತ್ತಿದ್ದರು. ಅನಂತರ ಚೂಪಾದ ಮೊನೆಯುಳ್ಳ ಸುತ್ತಿಗೆಯಂಥ ಆಯುಧದಿಂದ ಮೆದುವಾದ ಪೆಟ್ಟುಗಳನ್ನು ಕೊಟ್ಟು ಆಯುಧದ ಮೇಲಿನ ಉಬ್ಬುತಗ್ಗುಗಳನ್ನು ತೆಗೆದು ಸಮನಾಗಿಸುತ್ತಿದ್ದರು. ಈ ಕ್ರಿಯೆಯನ್ನು ಕೆತ್ತುವುದು ಪೆಕ್ಕಿಂಗ್ ಎಂದು ವರ್ಣಿಸಬಹುದು. ಮೂರನೆಯ ಹಂತದಲ್ಲಿ ಸ್ವಲ್ಪ ತಗ್ಗುಳ್ಳ ಬಂಡೆಯ ಮೇಲೆ ಮರಳು ಮತ್ತು ಸ್ವಲ್ಪ ನೀರನ್ನುಪಯೋಗಿಸಿ ಆಯುಧವನ್ನು ತೀಡಲಾಗುತ್ತಿತ್ತು. ಮೊದಲಿಗೆ ಕೇವಲ ಅಂಚುಗಳನ್ನು ಮಾತ್ರ ಈ ರೀತಿ ತೀಡಿ ನಯಗೊಳಿಸಲಾಗುತ್ತಿತ್ತು. ಕಾಲಕ್ರಮೇಣ ಇಡೀ ಆಯುಧವನ್ನು ಈ ರೀತಿ ನಯಗೊಳಿಸಲಾರಂಭಿಸಿದರು. ಆಯುಧತಯಾರಿಕೆಯ ಕಾರ್ಯ ಇಲ್ಲಿಗೆ ಮುಗಿದಂತೆ ಎಂಬುದು ಅನೇಕ ಪ್ರಾಕ್ತನಶಾಸ್ತ್ರಜ್ಞರ ಮತ. ಆದರೆ ಈ ಉಪಕರಣಗಳು ಹೊಳೆಯುವಂತೆ ಇವಕ್ಕೆ ಮೆರಗು ಕೊಡುವುದೂ ಕೆಲಸಂದರ್ಭಗಳಲ್ಲಿ ರೂಢಿಯಲ್ಲಿತ್ತೆಂಬುದು ಇನ್ನು ಕೆಲವರ ಅಭಿಪ್ರಾಯ.