ⓘ ಕಡಲ ಹಾವುಗಳು

                                     

ⓘ ಕಡಲ ಹಾವುಗಳು

ಉಷ್ಣ ಹಾಗೂ ಸಮಶೀತೋಷ್ಣವಲಯಗಳ ಸಮುದ್ರ ಪ್ರದೇಶದಲ್ಲಿ ವಾಸಿಸುವ ಅತ್ಯಂತ ವಿಷಪುರಿತ ಬಗೆಯವು. ಇವು ನಾಗರಹಾವುಗಳ ಸಂಬಂಧಿ ಹೈಡ್ರೋಫಿಡೀ ಕುಟುಂಬಕ್ಕೆ ಸೇರಿದವು. ಏಷ್ಯ ಮತ್ತು ಆಸ್ಟ್ರೇಲಿಯಗಳ ತೀರಪ್ರದೇಶದಲ್ಲಿ ಇವುಗಳ ಸಂಖ್ಯೆ ಹೆಚ್ಚು. ಒಂದು ಜಾತಿಯ ಕಡಲ ಹಾವು ಆಫ್ರಿಕದ ಪುರ್ವತೀರಪ್ರದೇಶದಲ್ಲೂ ಕಂಡುಬಂದಿದೆ. ಹಾಗೆಯೇ ಮತ್ತೊಂದು ಉತ್ತರ ಅಮೆರಿಕದ ಪಶ್ಚಿಮತೀರಪ್ರದೇಶದಲ್ಲಿ ಕಂಡುಬಂದಿದೆ. ಅಟ್ಲಾಂಟಿಕ್ ಸಾಗರದಲ್ಲಿ ಇವುಗಳ ಸುಳಿವಿಲ್ಲ.

                                     

1. ಲಕ್ಷಣಗಳು

ಇವು ಜಲಜೀವನಕ್ಕೆ ಅಚ್ಚುಕಟ್ಟಾಗಿ ಹೊಂದಿಕೊಂಡಿವೆ. ದೋಣಿಯ ಹುಟ್ಟಿನಂತೆ ಮಾರ್ಪಟ್ಟಿರುವ ಚಪ್ಪಟೆಯಾದ ಬಾಲ. ಕವಾಟಗಳಿಂದ ಕೂಡಿದ ಮೂಗಿನ ಹೊಳ್ಳೆಗಳು ಮತ್ತು ಮೊಂಡಾದ ನಾಲಗೆ-ಇವು ಜಲಜೀವನದ ಪರಿಹೊಂದಾಣಿಕೆಗಳು. ತಮ್ಮ ಉಪ್ಪು ನೀರಿನ ಪರಿಸರಕ್ಕೆ ಅನ್ವಯಿಸಿದಂತೆ ಇವುಗಳ ಮೂಗಿನಲ್ಲಿ ನಾಸಾ ಗ್ರಂಥಿ ಬೆಳೆದು ಹೆಚ್ಚಿನ ಉಪ್ಪನ್ನು ವಿಸರ್ಜಿಸುತ್ತದೆ. ಈಜುವುದರಲ್ಲಿ ಪ್ರಾವೀಣ್ಯ ಪಡೆದಿರುವ ಇವು ಭೂಮಿಯ ಮೇಲೆ ಹರಿದಾಡಲು ಅಸಮರ್ಥವಾಗಿವೆ. ನೀರಿನಲ್ಲಿದ್ದಾಗ ನೀರು ದೇಹವನ್ನು ಪ್ರವೇಶಿಸದಂತೆ ಮೂಗಿನ ಹೊಳ್ಳೆಗಳನ್ನು ಕವಾಟಗಳು ಮುಚ್ಚುತ್ತವೆ. ಸಾಮಾನ್ಯವಾಗಿ ತೀರಪ್ರದೇಶದಲ್ಲಿ ಹೆಚ್ಚಾಗಿ ಕಂಡುಬಂದರೂ ಇವು ದಡದಿಂದ ಬಹು ದೂರ ಈಜಿಹೋಗಬಲ್ಲುವು. ದಾಳಿಕಾರ ಪ್ರವೃತ್ತಿ ಇವುಗಳ ಹುಟ್ಟುಗುಣವಲ್ಲ. ಸಮುದ್ರತೀರದಲ್ಲಿ ಈಜಾಡುವವರಿಗೆ ಸಾಮಾನ್ಯವಾಗಿ ಇವು ಹಿಂಸೆ ಮಾಡುವುದಿಲ್ಲ. ಆಕಸ್ಮಾತ್ತಾಗಿ ಹಿಡಿದರೆ ಅಥವಾ ಢಿಕ್ಕಿ ಹೊಡೆದರೆ ಕಚ್ಚುವುದುಂಟು. ಇವಕ್ಕೆ ಪತಂಗಗಳಂತೆ ಬೆಳಕು ಬಲು ಇಷ್ಟ. ರಾತ್ರಿಯ ವೇಳೆ ಕಡಲ ತೀರದಲ್ಲಿ ಲಾಂದ್ರವನ್ನಿಟ್ಟರೆ ಅದರ ಬೆಳಕಿಗೆ ಆಕರ್ಷಿತವಾಗಿ ದಡಕ್ಕೆ ಬರುತ್ತದೆ. ಇವನ್ನು ಹಿಡಿಯುವವರು ಈ ವಿಧಾನವನ್ನು ಅನುಸರಿಸುತ್ತಾರೆ. ನ್ಯೂ ಗಿನಿಯಲ್ಲಿ ಅಲ್ಲಿನ ಕಡಲ ಹಾವುಗಳು ದೊಡ್ಡ ದೊಡ್ಡ ನದಿಗಳನ್ನು ಪ್ರವೇಶಿಸುವುದುಂಟು. ಬೆಸ್ತರು ನದಿಗಳಲ್ಲಿ ಮೀನು ಹಿಡಿಯುವಾಗ ಅವರ ಬಲೆಗಳಿಗೆ ಇವು ಬಿದ್ದರೆ ಅವರು ಹೆದರಿಕೆಯಿಲ್ಲದೆ ಇವನ್ನು ಹಿಡಿದು ನದಿಗೆ ಎಸೆದು ಬಿಡುತ್ತಾರೆ. ಚೀನಾ ದೇಶದಲ್ಲಿ ಚೀನೀಯರು ಇವನ್ನು ತಿನ್ನುವುದುಂಟು. ಕಡಲ ಹಾವಿನ ವಿಷದ ನಂಜು ನರಗಳ ಮೇಲೆ ಪರಿಣಾಮಕಾರಿಯಾಗಿದೆ. ಮುಂಬೈಯ ಹಾಫ್ಕಿನ್ ಇನ್ಸ್ಟಿಟ್ಯೂಟಿನಲ್ಲಿ ಇದರ ನಂಜನ್ನು ಶಮನಗೊಳಿಸುವ ಆಂಟಿವೆನಿನ್ ಅಥವಾ ಪ್ರತಿವಿಷವನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಈ ಕಡಲ ಹಾವುಗಳ ಕುಟುಂಬದಲ್ಲಿ ಎರಡು ಉಪಕುಟುಂಬಗಳಿವೆ. 1 ಹೈಡ್ರೋಫಿನೀ. 2 ಲಾಟಿಕಾನಿನೀ.

                                     

2. ಲಾಟಿಕಾನಿನೀ

ಲಾಟಿಕಾನಿನೀ ಗುಂಪಿನವು ಸಮುದ್ರದ ದಡಕ್ಕೆ ಬಂದು ಮೊಟ್ಟೆಗಳನ್ನಿಡುತ್ತವೆ. ಪೆಲಾಮಿಸ್ ಪ್ಲಾಟೂರಸ್ ಎಂಬ ಕಡಲ ಹಾವು ಹಿಂದೂ ಸಾಗರ ಮತ್ತು ಪೆಸಿಫಿಕ್ ಸಾಗರಗಳ ತೀರದಲ್ಲೆಲ್ಲ ಕಂಡುಬರುತ್ತದೆ. ಇದು ಸಾಮಾನ್ಯವಾಗಿ ಒಂದು ಮೀಟರು ಉದ್ದ ಬೆಳೆಯುತ್ತದೆ. ದೇಹ ಕಂದು ಅಥವಾ ಬೂದು ಬಣ್ಣವಾಗಿದ್ದು ಮೇಲೆ ಕಪ್ಪು ಪಟ್ಟಿಗಳಿರುತ್ತವೆ. ಭಾರತ ದೇಶದಲ್ಲಿ 8 ಜಾತಿ ಮತ್ತು 19 ಪ್ರಭೇದಗಳಿವೆ. ಕರಿಲಿಯ, ಲಾಟಿಕಾಡ, ಪ್ರೆಸ್ಕುಲೇಟ, ಎನ್ಹೈಡ್ರಿನ, ಹೈಡ್ರೋಫಿಸ್, ಲಪೆಮಿಸ್, ಮೈಕ್ರೋಸೆಫಾಲೋಫಿಸ್ ಮತ್ತು ಪೆಲಾಮಿಸ್ ಜಾತಿಯ ಕಡಲಹಾವುಗಳ ಪೈಕಿ ಕೊನೆಯ ಆರು ಜಾತಿಗಳು ಕನ್ನಡನಾಡಿನ ಕಡಲತೀರದಲ್ಲ್ಲಿ ಕಾಣಬರುತ್ತವೆ.